ಬುರೂನ್‍ಡೀ
ಪೂರ್ವ ಆಫ್ರಿಕದ ಒಂದು ಗಣರಾಜ್ಯ.  ಆಫ್ರಿಕದ ಮಧ್ಯದಲ್ಲಿ ಹಾದು ಹೋಗಿರುವ ಸಮಭಾಜಕ ವೃತ್ತದ ದಕ್ಷಿಣದಲ್ಲಿದೆ.  ಈ ರಾಜ್ಯವನ್ನು ಉತ್ತರದಲ್ಲಿ ರೂವಾಂಡ, ಪೂರ್ವ ಮತ್ತು ದಕ್ಷಿಣದಲ್ಲಿ ಟ್ಯಾನ್‍ಜûನೀಯ ಪಶ್ಚಿಮದಲ್ಲಿ ಜೈರೆ ಗಣರಾಜ್ಯಗಳೂ ಹಾಗೂ ಪಶ್ಚಿಮದಲ್ಲಿ ಟ್ಯಾಂಗನ್ಯೀಕ ಸರೋವರ ಸುತ್ತುವರೆದಿವೆ.  ಹೆಚ್ಚು ಜನಸಂಖ್ಯೆಯಿದ್ದು ವಿಸ್ತೀರ್ಣದಲ್ಲಿ ಆಫ್ರಿಕದ ಬಲುಚಿಕ್ಕ ರಾಜ್ಯವೆನಿಸಿರುವ ಇದು ದಕ್ಷಿಣೋತ್ತರವಾಗಿ 241 ಕಿಮೀ.  ಪೂರ್ವ ಪಶ್ಚಿಮವಾಗಿ 217 ಕಿಮೀ, ಇದ್ದು ಒಟ್ಟು ವಿಸ್ತೀರ್ಣ 27,834 ಚಕಿಮೀ, ಇದೆ.  ಜನಸಂಖ್ಯೆ 4,400,000 (1981).  ರಾಜಧಾನಿ ಬೂಜಂಬುರ.  15,1,000 (1979).

	ಬುರೂನ್‍ಡೀ ಸಮಭಾಜಕ ವೃತ್ತಕ್ಕೆ ಹತ್ತಿರದಲ್ಲಿದ್ದರೂ ಇಲ್ಲಿರುವ ಬೆಟ್ಟಗುಡ್ಡಗಳ ದೆಸೆಯಿಂದ ತಂಪಾದ ಹವಾಗುಣ ಪಡೆದಿದೆ.  ವಾರ್ಷಿಕ ಉಷ್ಣತೆ ಸರಾಸರಿ 210 ಸೆ. ನಿಂದ ಗರಿಷ್ಠ 330 ಸೆ. ಮುಟ್ಟುತ್ತದೆ.  ಬೂಜಂಬುರ ಸುತ್ತುಲಿನ ರಿಫ್ಟ್ ಕಣಿವೆ ಪ್ರದೇಶದಲ್ಲಿ ಸರಾಸರಿ ಉಷ್ಣತೆ 230 ಸೆ. ಮತ್ತು ವಾರ್ಷಿಕ ಸರಾಸರಿ ಮಳೆ 76 ಸೆಂಮೀ.  ಬೆಟ್ಟಗುಡ್ಡಗಳ ಪಶ್ಚಿಮ ಪ್ರದೇಶದಲ್ಲಿ ಉಷ್ಣತೆ 170 ಸೆ. ಇದ್ದು ವಾರ್ಷಿಕ ಮಳೆ 147 ಸೆಂಮೀ.  ಪ್ರಸ್ಥಭೂಮಿಯ ಪ್ರದೇಶದಲ್ಲಿ ಸರಾಸರಿ ಉಷ್ಣತೆ 200 ಸೆ. ಇದ್ದು ಸುಮಾರು 119 ಸೆಂಮೀ ಮಳೆಯಾಗುತ್ತದೆ.  ಸಾಧಾರಣವಾಗಿ ಫೆಬ್ರುವರಿಯಿಂದ ಮೇ ತಿಂಗಳ ತನಕ ಮಳೆಗಾಲ.  ಈ ರಾಜ್ಯದ ಪಶ್ಚಿಮ ಮತ್ತು ದಕ್ಷಿಣದಲ್ಲಿ ಟ್ಯಾಂಗನ್ಯೀಕ ಸರೋವರ ಹಾಗೂ ಉತ್ತರದಲ್ಲಿ ಎರಡು ಸರೋವರಗಳಿವೆ.  ರೂವೂಬು, ರೂಸೀಜಿ ಮುಖ್ಯ ನದಿಗಳು.  ಇಲ್ಲಿಯ ಪರ್ವತ ಇಳಿಜಾರು ಪ್ರದೇಶ ತೇವದಿಂದ ಕೂಡಿದ್ದು ಸಸ್ಯಸಮೃದ್ಧಿಯಾದ ಅರಣ್ಯಗಳಿಂದ ಆವೃತವಾಗಿವೆ.  ಪ್ರಸ್ಥಭೂಮಿಯಲ್ಲಿ ಸವನ್ನಾಹುಲ್ಲುಗಾವಲುಗಳಿವೆ.  ಆನೆ, ಸಿಂಹ, ಚಿರತೆ, ಕಾಡೆಮ್ಮೆಗಳು, ನರುಳ್ಳಿ, ಹಂದಿಗಳು, ಕಡವೆ, ನಾಯಿಮುಖದ ಕೋತಿ ಮುಂತಾದವುಗಳೂ ಮೊಸಳೆ, ನೀರಾನೆ ಮುಂತಾದ ಜಲಚರಗಳೂ ಇವೆ

	ಅಧಿಕ ಮಳೆ, ಭೂಸವೆತ ಮತ್ತು ದೋಷಯುಕ್ತ ಕೃಷಿ ವಿಧಾನಗಳಿಂದಾಗಿ ಇಲ್ಲಿಯ ಭೂಮಿ ನಿಸ್ಸಾರವಾಗಿದೆ.  ಬಾರ್ಲಿ, ಕಾಫಿ, ಕೆಲವು ಬಗೆಯ ಕಾಳುಗಳು, ಹತ್ತಿ, ಬಟಾಣಿ, ನೆಲಗಡಲೆ, ಗೆಣಸು, ಚಹಾ, ಹೊಗೆಸೊಪ್ಪು, ಗೋದಿ, ಹಲವು ತೆರನ ಗಿಡಗಡ್ಡೆಗಳನ್ನು ಇಲ್ಲಿ ಬೆಳೆಸುತ್ತಾರೆ.  ಟ್ಯಾಂಗನ್ಯೀಕ ಸರೋವರದಲ್ಲಿ ವರ್ಷಕ್ಕೆ ಸುಮಾರು ಹತ್ತು ಸಾವಿರ ಟನ್ ಮೀನು ಲಭಿಸುತ್ತದೆ.  ಕಾಫಿ ಹಾಗೂ ಟಿನ್ ಪ್ರಧಾನ ರಫ್ತು ಸಾಮಗ್ರಿ.  ಬುರೂನ್ ಡೀ ತೀರ ಒಳನಾಡಿನಲ್ಲಿದ್ದು ಸುತ್ತಲೂ ಭೂ ಆವೃತವಾಗಿದೆ.  ಸಮುದ್ರ ಬಲುದೂರ, ಉತ್ತಮ ರೈಲುರಸ್ತೆಗಳಿಲ್ಲ.  ಸಮುದ್ರವ್ಯಾಪಾರ ತೀರ ತ್ರಾಸದಾಯಕ ಮತ್ತು ದುಬಾರಿ.  ಟ್ಯಾಂಗನ್ಯೀಕ ಸರೋವರ ಜಲಮಾರ್ಗ ಇಲ್ಲಿಯ ವ್ಯಾಪಾರಕ್ಕೆ ಸ್ವಲ್ಪ ಅನುಕೂಲವಾಗಿದ್ದು ಬೂಜಂಬುರದಿಂದ ದೋಣಿಗಳು ಟ್ಯಾನ್ ಜûನೀಯದ ಕಿಗೋಮ ಮತ್ತು eóÉೈರೆಯ ಕಾಲೆಮೀ ನಗರಗಳಿಗೆ ಸಾಮಾನುಗಳನ್ನು ಮುಟ್ಟಿಸುತ್ತವೆ.  ಅಲ್ಲಿಂದ ಮುಂದೆ ಅವು ಸಮುದ್ರತೀರದ ಬಂದರನ್ನು ಸೇರುವುವು.

	ಈ ದೇಶದ ಶೇಕಡಾ 84ರಷ್ಟು ಜನ ಬಹುಟು ಪಂಗಡದವರು.  ಇವರು ತಮ್ಮ ಕುಟುಂಬವನ್ನು ಪೋಷಿಸುವಷ್ಟು ಮಾತ್ರ ಧಾನ್ಯ ಬೆಳೆಸುವ ಕೃಷಿಕರು.  ಶೇಕಡಾ ಸುಮಾರು 15ರಷ್ಟು ಜನ ವಟುಷಿ ಬುಡಕಟ್ಟಿನವರು; ಪಶುಪಾಲನೆ ಮುಖ್ಯ ವೃತ್ತಿ, ರಕ್ತ, ಮಾಂಸ, ಹಾಲು ಮತ್ತು ಹಾಲಿನ ಪದಾರ್ಥಗಳು ಮತ್ತು ಮೀನು ಇವರ ಪ್ರಧಾನ ಆಹಾರ.  ಇವರು ನರ್ತನ ಹಾಗೂ ಎತ್ತರ ನೆಗೆತಕ್ಕೆ ಹೆಸರಾದವರು.  ಕೆಲವು ವಟುಷಿ ಜನ 213 ಸೆಂಮೀ (ಏಳು ಅಡಿ) ಎತ್ತರ ಇರುವುದುಂಟು. ಕಾಡಿನ ಹಣ್ಣು ಹಂಪಲುಗಳನ್ನು ಹುಡುಕಿ ಸಂಗ್ರಹಿಸುತ್ತಿದ್ದ ಕುಳ್ಳ ಪಿಗ್ಮಿ ಜನರಲ್ಲಿ ಹಲವರು ಈಗ ಮಡಿಕೆಕುಡಿಕೆಗಳನ್ನು ತಯಾರಿಸುತ್ತಾರೆ.  ಇವರು ಸುಮಾರು 137 ಸೆಂಮೀ (ನಾಲ್ಕೂವರೆ ಅಡಿ) ಎತ್ತರವಿರುತ್ತಾರೆ.

	ಫ್ರೆಂಚ್ ಹಾಗೂ ಕಿರೂನ್‍ಡಿ ಇಲ್ಲಿಯ ಅಧಿಕೃತ ಭಾಷೆಗಳು.  ಬಂಟು ವರ್ಗಕ್ಕೆ ಸೇರಿದ ಕಿರೂನ್‍ಡಿ ಹೆಚ್ಚು ಜನರ ಆಡುಭಾಷೆ.  ಜನರಲ್ಲಿ ಅರ್ಧಕ್ಕೂ ಹೆಚ್ಚು ಜನ ರೋಮನ್ ಕ್ಯಾತೊಲಿಕರು.  ಉಳಿದವರು ಸ್ಥಳೀಯ ಮಾಟ, ಮಂತ್ರಗಳಲ್ಲಿ ನಂಬಿಕೆಯುಳ್ಳವರು.

	ಬುರೂನ್‍ಡೀಯ ಪ್ರಾಚೀನ ಇತಿಹಾಸ ಇನ್ನೂ ಅಜ್ಞಾತವಾಗಿಯೆ ಉಳಿದಿದೆ.  ಕ್ರಿ.ಶ. 14ನೆಯ ಶತಮಾನದ ಕೊನೆಯಲ್ಲಿ ಇಥಿಯೋಪಿಯದಿಂದ ಬಂದ ವಟುಷಿ ಜನರು ಈ ಪ್ರದೇಶವನ್ನು ಆಕ್ರಮಿಸಿದರು.  ಪರಾಜಿತ ಬಹುಟು ಜನ ಅವರ ಅಡಿಯಾಳುಗಳಾಗಿ ಇರಬೇಕಾಯಿತು.

	1897ರಲ್ಲಿ ಜರ್ಮನರು ಈಗಿನ ಬುರೂನ್‍ಡೀ ಮತ್ತು ರೂವಾಂಡ ಪ್ರದೇಶವನ್ನು ಗೆದ್ದರು.  ರುವಾಂಡ-ಉರುಂಡಿ ಎಂಬ ಹೆಸರಿದ್ದ ಈ ಪ್ರದೇಶ ಜರ್ಮನ್ ಈಸ್ಟ್ ಆಫ್ರಿಕದ ಒಂದು ಭಾಗವಾಯಿತು.  1916ರಲ್ಲಿ ಮೊದಲ ಮಹಾಯುದ್ಧ ಕಾಲದಲ್ಲಿ ಬೆಲ್ಜಿಯಮಿನ ಅಧೀನವಾಗಿ 1919ರಲ್ಲಿ ಬೆಲ್ಜಿಯಮ್ ಆಡಳಿತಕ್ಕೆ ಸೇರಿದ ನಿಯುಕ್ತ ಪ್ರದೇಶವೆನಿಸಿತು.  1946ರಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನ ಇದನ್ನು ನ್ಯಾಸಾಡಳಿತ ಪ್ರದೇಶವಾಗಿ ಪರಿವರ್ತಿಸಿತು.  1961ರಲ್ಲಿ ಉರುಂಡಿ ಸ್ವತಂತ್ರ ರಾಜಪ್ರಭುತ್ವವಾಗಬೇಕೆಂದು ಬಯಸಿ ಮತಹಾಕಿದರೆ ರುವಾಂಡ ಗಣರಾಜ್ಯವಾಗಲು ನಿರ್ಧರಿಸಿ ಮತ ನೀಡಿದುವು.  1962 ಜುಲೈ 1 ರಂದು ಇವೆರಡೂ ಸ್ವತಂತ್ರ ರಾಷ್ಟ್ರಗಳಾಗಿ ರೂಪುಗೊಂಡವು.

	ಬುರೂನ್‍ಡೀ ಸ್ವತಂತ್ರವಾದ ಅನಂತರ ಬಹುಟು ಮತ್ತು ವಟುಷಿ ಜನರ ನಡುವೆ ಅಶಾಂತಿ ಮೂಡಿತು.  ಬಹುಟು ಜನ ವಟುಷಿಯವರ ಆಳ್ವಿಕೆಯನ್ನು ಸಹಿಸಲಿಲ್ಲ.  1965ರಲ್ಲಿ ಪ್ರಧಾನಮಂತ್ರಿಯ ಕೊಲೆಯಾಯಿತು.  ಅನಂತರ ಬಂದ ಉತ್ತರಾಧಿಕಾರಿಯೂ ಅದೇ ವರ್ಷ ಬಂಡುಗಾರ ಸೈನ್ಯದ ಗುಂಡೇಟಿಗೆ ಗುರಿಯಾಗಿ ಗಾಯಗೊಂಡು ಅಧಿಕಾರ ಕಳೆದುಕೊಂಡ.  ಮಿಲಿಟರಿ ನಾಯಕರು ಅಧಿಕಾರ ವಹಿಸಿಕೊಂಡರು.  1966ರಲ್ಲಿ ಅಲ್ಲಿಯ ಅರಸನನ್ನು ಪದಚ್ಯುತಗೊಳಿಸಿ ಗಣರಾಜ್ಯ ಸ್ಥಾಪನೆ ಮಾಡಿ ಮಿಲಿಟರಿ ಅಧಿಕಾರಿ ತಾನೇ ಅಧ್ಯಕ್ಷನೆಂದು ಘೋಷಿಸಿಕೊಂಡ.  1972ರಲ್ಲಿ ವಟುಷಿ ಜನರ ವಿರುದ್ಧ ನಡೆದ ಬಹುಟು ಬಂಡಾಯ ವಿಫಲವಾದರೂ ಸುಮಾರು ಅರ್ಧಲಕ್ಷ ಜನರ ಹತ್ಯೆಯಲ್ಲಿ ಪರ್ಯವಸಾನಗೊಂಡಿತೆಂದು ಹೇಳುವರು.

	ಬುರೂನ್‍ಡೀ ಗಣರಾಜ್ಯದ ಅಧ್ಯಕ್ಷ ರಾಷ್ಟ್ರದ ಮುಖಂಡ.  ಏಳು ವರ್ಷಕ್ಕೊಮ್ಮೆ ಆಯ್ಕೆಯಾಗುವ ಈತ ನ್ಯಾಷನಲ್ ರೆವಲ್ಯೂಷನರಿ ಕಮಿಟಿ ಸಹಾಯದಿಂದ ರಾಜ್ಯಪಾಲನೆ ಮಾಡುತ್ತಾನೆ.  ಬುರೂನ್‍ಡೀಯ ಎಂಟು ಪ್ರಾಂತ್ಯಗಳ ಆಡಳಿತವನ್ನು ಮಿಲಿಟರಿ ಅಧಿಕಾರಿಗಳಿಗೇ ವಹಿಸಲಾಗಿದೆ.
(ಎಚ್.ಎಂ.ಎನ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ